ಈಟಿಪಡೆ-
ಈಟಿಯ ಸಹಾಯದಿಂದ ಕಾದಾಡುವ ಸೈನಿಕರ ಸಮೂಹ (ಲ್ಯಾನ್ಸರ್ಸ್). ಮೈಸೂರು ಲ್ಯಾನ್ಸರ್ಸ್ ಎಂಬ ಹೆಸರಿನ ಈಟಿಪಡೆ ಒಂದು ಕಾಲದಲ್ಲಿ ಹೆಸರಾಂತ ದಳವಾಗಿತ್ತು. ಸೂಯೆಜ್ ಕಾಲುವೆ ಪ್ಯಾಲಿಸ್ಟೈನ್ ಮತ್ತು ಗಾಜû ಎಂಬ ಸ್ಥಳಗಳಲ್ಲಿ ಈ ಪಡೆ ಕಾಳಗಕ್ಕೆ ಇಳಿದಿತ್ತು (1905). ಇಲ್ಲೆಲ್ಲ ಮೈಸೂರು ಲ್ಯಾನ್ಸರುಗಳದ್ದೇ ಸೈನ್ಯದ ಮುಂಚೂಣಿ. ಈ ವೀರಯೋಧರ ಸಾಹಸವನ್ನು ಮೆಚ್ಚಿ ಆಗಿನ ಬ್ರಿಟಿಷ್ ಸಾರ್ವಭೌಮ ಸೈನ್ಯದ ವರಿಷ್ಠಾಧಿಕಾರಿ (ಕಮಾಂಡರ್-ಇನ್-ಚೀಫ್) ಪ್ರಶಂಸಾಪತ್ರವನ್ನು ತಾರು ಮೂಲಕ ಭಾರತದ ವೈಸ್‍ರಾಯರಿಗೆ ಕಳುಹಿಸಿದ್ದ. 1918ರಲ್ಲಿ ಅಲೆಪ್ಪೊ ಎಂಬ ಸ್ಥಳದ ಘೋರ ಕಾಳಗದಲ್ಲಿ ಅನೇಕ ಲ್ಯಾನ್ಸರುಗಳು ಗಾಯಗೊಂಡರು. ಹಲವರು ಮಡಿದರು. ಅವರ ಮಹಾಸೇವೆಯನ್ನು ಮನ್ನಿಸಲು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರು ಜಂಗಿ ಇನಾಂ ಎಂಬ ದೊಡ್ಡ ಪ್ರದೇಶವನ್ನೇ ಅವರಿಗೆ ಉಚಿತವಾಗಿ ಕೊಟ್ಟರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಈ ಪಡೆಯವರನ್ನು ಭಾರತೀಯ ಸೈನ್ಯದಲ್ಲಿ ವಿಲೀನಗೊಳಿಸಲಾಯಿತು. ಮೈಸೂರು ಲ್ಯಾನ್ಸರ್ಸ್ ಎಂಬ ಪ್ರತ್ಯೇಕ ಪಡೆ ಇಂದಿಲ್ಲ.
(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ